ಅಭಿಪ್ರಾಯ / ಸಲಹೆಗಳು

ಮಹಿಳಾ ಕಲ್ಯಾಣ ಯೋಜನೆಗಳು

 

 ಸಾಂತ್ವನ ಯೋಜನೆ:

ಉದ್ದೇಶ:

ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳೆಯರಿಗೆ ನೆರವು ಒದಗಿಸುವುದು,ಸಾಂತ್ವನ ಕೇಂದ್ರಗಳನ್ನು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ.ಈ ಕೇಂದ್ರಗಳಲ್ಲಿ ಒಬ್ಬರು ಸಮಾಲೋಚಕರು ಹಾಗೂ ಮೂವರು ಸಮಾಜಸೇವಾ ಕಾರ್ಯಕರ್ತರು ದಿನದ 24 ಗಂಟೆಗಳೂ ಸಂಕಷ್ಟಕ್ಕೊಳಗಾದ ಮಹಿಳೆಯರಿಗೆ ಸಮಾಲೋಚನೆ ಒದಗಿಸುತ್ತದೆ.ಪ್ರಸ್ತುತ ತಾಲ್ಲೂಕುಗಳಲ್ಲಿ ಒಟ್ಟು 180 ಸಾಂತ್ವನ ಕೇಂದ್ರಗಳು ಕಾರ್ಯನಿರತವಾಗಿವೆ.

 

ಬಾಲಕಿಯರ ವಸತಿ ನಿಲಯಗಳು:

ಉದ್ದೇಶ:

ಗ್ರಾಮಾಂತರ ಹಾಗೂ ಹಿಂದುಳಿದ ಪ್ರದೇಶಗಳ ಹೆಣ್ಣು ಮಕ್ಕಳಲ್ಲಿ ಶಿಕ್ಷಣ ಪ್ರೋತ್ಸಾಹಿಸಲು ಹಾಗು ಶಾಲೆ ಬಿಡುವ ಹೆಣ್ಣುಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡಲು ಇಲಾಖಾವತಿಯಿಂದ ಬಾಲಕಿಯರ ವಸತಿ ನಿಲಯಗಳನ್ನು ನಡೆಸಲಾಗುತ್ತಿದೆ.ಸರ್ಕಾರ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ಪ್ರೀ ಮೆಟ್ರ್ರಿಕ್ ಮತ್ತು ಪೋಸ್ಟ್ ಮೆಟ್ರ್ರಿಕ್ ವಿದ್ಯಾರ್ಥಿನಿಯರಿಗೆ ವಸತಿ ಸೌಕರ್ಯ ಕಲ್ಪಿಸುವುದು.ಈ ವಸತಿ ನಿಲಯಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ಗೌರವಧನ, ಕಟ್ಟಡದ ಬಾಡಿಗೆ ಮತ್ತು ವಿದ್ಯಾರ್ಥಿನಿಯರ ಆಹಾರ ಭತ್ಯೆಯನ್ನು ಇಲಾಖೆಯಿಂದ ಭರಿಸಲಾಗುತ್ತಿದೆ.ಪ್ರಸ್ತುತ ರಾಜ್ಯದಲ್ಲಿ 37 ಬಾಲಕಿಯರ ವಸತಿ ನಿಲಯಗಳು ಕಾರ್ಯನಿರ್ವಹಿಸುತ್ತಿದೆ. ಅದರಲ್ಲಿ 19 ಪ್ರೀ ಮೆಟ್ರಿಕ್ ಮತ್ತು 18 ಪೋಸ್ಟ್ ಮೆಟ್ರಿಕ್ ವಸತಿ ನಿಲಯಗಳು.ಇದಲ್ಲದೆ ನಿಯತಕಾಲಿಕವಾಗಿ ವಸತಿ ನಿಲಯಗಳ ಪಾಕೋಪಕರಣ ಹಾಗೂ ಪೀಠೋಪಕರಣ ಖರೀದಿಗಾಗಿ ಅನುದಾನವನ್ನು ಬಿಡುಗಡೆ ಮಾಡಲಾಗುವುದು.ವಿದ್ಯಾರ್ಥಿನಿಯರ ಸುರಕ್ಷತಾ ಹಿತದೃಷ್ಟಿಯಿಂದ ಸಿಸಿಟಿವಿ ಕ್ಯಾಮರಾಗಳನ್ನು ವಸತಿ ನಿಲಯಗಳಲ್ಲಿ ಅಳವಡಿಸಲು ಕ್ರಮಕೈಗೊಳ್ಳಲಾಗುತ್ತಿದೆ.

 

ರಾಜ್ಯ ಸರ್ಕಾರದ ಉದ್ಯೋಗಸ್ಥ ಮಹಿಳೆಯರ ವಸತಿಗೃಹ ನಿರ್ಮಾಣ ಯೋಜನೆ:

ಉದ್ದೇಶ: 

ಪಟ್ಟಣ ಹಾಗೂ ನಗರ ಪ್ರದೇಶ ಗಳಲ್ಲಿ ವಾಸಿಸುತ್ತಿರುವ ಮಹಿಳೆ ಯರಿಗೆ ಸುರಕ್ಷಿತ ಹಾಗೂ ಯೋಗ್ಯ ವಸತಿ ಸೌಕರ್ಯವನ್ನು ಕಲ್ಪಿಸುವುದು.ಈ ಯೋಜನೆಯಡಿ ಪ್ರತಿ ಜಿಲ್ಲಾ ಕೇಂದ್ರದಲ್ಲಿ 4000 ಚದರಡಿ ನಿವೇಶನದಲ್ಲಿ ಉದ್ಯೋಗಸ್ಥ ಮಹಿಳಾ ವಸತಿಗೃಹ ನಿರ್ಮಿಸಲು ನೋಂದಾಯಿತ ಖಾಸಗಿ ಸಂಸ್ಥೆ/ ಸ್ವಯಂ ಸೇವಾ ಸಂಸ್ಥೆಗಳಿಗೆ ರೂ.25.00 ಲಕ್ಷಗಳ ಮಿತಿಗೊಳಪಟ್ಟಂತೆ ರಾಜ್ಯ ಸರ್ಕಾರದಿಂದ ನೆರವು ಒದಗಿಸಲಾಗುವುದು.

 

ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ:

ಮಹಿಳೆಯರ ಅಭಿವೃದ್ಧಿಗಾಗಿ ಐದು ವರ್ಷಗಳ ಕಾಲ ಸತತವಾಗಿ ಕಾರ್ಯೋನ್ಮುಖವಾಗಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳಿಗೆ ಹಾಗೂ ಕ್ರೀಡೆ, ಸಾಹಿತ್ಯ, ಕಲೆ, ಶಿಕ್ಷಣ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿರುವ ಮಹಿಳೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಲಾಗುತ್ತಿದೆ.ಸಂಕಷ್ಟ ಪರಿಸ್ಥಿತಿಯಲ್ಲಿ ಧೈರ್ಯಸಾಹಸದಿಂದ ಇತರರ ಜೀವವನ್ನು ರಕ್ಷಿಸಿದಂತಹ ಮಹಿಳೆಗೆ ವೀರಮಹಿಳೆ ಪ್ರಶಸ್ತಿ ನೀಡಲಾಗುತ್ತಿದೆ.ಈ ಪ್ರಶಸ್ತಿಗಳಿಗಾಗಿ ಅರ್ಹ ಅರ್ಜಿಗಳನ್ನು ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಪತ್ರಿಕಾ ಜಾಹೀರಾತು ನೀಡುವ ಮೂಲಕ ಆಹ್ವಾನಿಸಲಾಗುತ್ತಿದೆ.ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರ ಅಧ್ಯಕ್ಷತೆಯಲ್ಲಿ ರಚಿಸಿರುವ ಆಯ್ಕೆ ಸಮಿತಿಯು ಪ್ರಸ್ತಾವನೆಗಳನ್ನು ಪರಿಶೀಲಿಸಿ, ಸೂಕ್ತ ಪ್ರಸ್ತಾವನೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡುವ ಅಧಿಕಾರ ಹೊಂದಿರುತ್ತದೆ.ಪ್ರಶಸ್ತಿಗಾಗಿ ಆಯ್ಕೆಗೊಂಡ ಸ್ವಯಂ ಸೇವಾ ಸಂಸ್ಥೆಗಳಿಗೆ ತಲಾ ರೂ.50,000/- ನಗದು ಮತ್ತು ಪ್ರಶಸ್ತಿ ಪತ್ರ ಹಾಗೂ ವ್ಯಕ್ತಿಗಳಿಗೆ ತಲಾ ರೂ.25,000/- ನಗದು ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಗುತ್ತಿದೆ.

 

ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯಗಳ ನಿರ್ಮಾಣ ಹಾಗೂ ವಿಸ್ತರಣೆಗಾಗಿ ಅನುದಾನ ಯೋಜನೆ:

ಉದ್ಯೋಗಸ್ಥ ಮಹಿಳೆಯರಿಗೆ ಹಾಗೂ ಉದ್ಯೋಗಕ್ಕಾಗಿ ತರಬೇತಿ ಪಡೆಯುತ್ತಿರುವ ಮಹಿಳೆಯರಿಗೆ (ಒಂದು ವರ್ಷಕ್ಕೆ ಮೀರದಂತೆ) ಕಡಿಮೆ ಬೆಲೆಯಲ್ಲಿ ಹಾಗೂ ಸುರಕ್ಷಿತವಾದಂತಹ ವಸತಿ ನಿಲಯಗಳನ್ನು ಒದಗಿಸುವುದಕ್ಕೋಸ್ಕರ ಅನುದಾನವನ್ನು ಸ್ವಯಂಸೇವಾ ಸಂಸ್ಥೆಗಳಿಗೆ ಬಿಡುಗಡೆ ಮಾಡಲಾಗುವುದು.ಯೋಜನೆಯ ಹೊಸ ಮಾರ್ಗಸೂಚಿಯನ್ವಯ ವಸತಿಗೃಹ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರದಿಂದ ಶೇ.60, ರಾಜ್ಯ ಸರ್ಕಾರದಿಂದ ಶೇ.15ರಷ್ಟು ಹಾಗೂ ಉಳಿದ ಶೇ.25ರಷ್ಟು ಅನುದಾನವನ್ನು ಸ್ವಯಂಸೇವಾ ಸಂಸ್ಥೆ ಭರಿಸಬೇಕಾಗಿರುತ್ತದೆ.ಇದುವರೆಗೆ ರಾಜ್ಯದಲ್ಲಿ 65 ಉದ್ಯೋಗಸ್ಥ ಮಹಿಳೆಯರ ವಸತಿಗೃಹಗಳು ಕಾರ್ಯನಿರ್ವಹಿಸುತ್ತಿದೆ.

 

ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ 2005 ನಿಯಮ 2006 

ಉದ್ದೇಶ:ಸಂವಿಧಾನದಲ್ಲಿ ಖಾತ್ರಿಪಡಿಸಿರುವ ಮಹಿಳೆಯರ ಹಕ್ಕುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ರಕ್ಷಣೆ ಮಾಡುವುದು ಈ ಕಾಯ್ದೆಯ ಉದ್ದೇಶ. ಕುಟುಂಬದೊಳಗಾಗುವ ಯಾವುದೇ ಬಗೆಯ ಹಿಂಸೆಗೊಳಗಾದ ಮಹಿಳೆಯರಿಗೆ ಸಂಬಂಧಿಸಿದಂತೆ ಹೆಚ್ಚು ಪರಿಣಾಮಕಾರಿಯಾದ ಸಂರಕ್ಷಣೆ ಒದಗಿಸುವುದಕ್ಕಾಗಿ ಭಾರತ ಸರ್ಕಾರವು ಕೌಟುಂಬಿಕ ಹಿಂಸೆಯಿಂದ ಮಹಿಳೆಯರನ್ನು ಸಂರಕ್ಷಣಾ ಅಧಿನಿಯಮ 2005 ಹಾಗೂ ನಿಯಮ 2006ನ್ನು ಅಕ್ಟೋಬರ್ 26 ರಿಂದ ಜಾರಿಗೆ ಬಂದಿರುತ್ತದೆ.ಕರ್ನಾಟಕ ರಾಜ್ಯದಲ್ಲಿ ಈ ಕಾಯ್ದೆಯನ್ನು ಜೂನ್ 2007 ರಿಂದ ಅನುಷ್ಠಾಗೊಳಿಸಲಾಗುತ್ತಿದೆ.

ಸಂರಕ್ಷಣಾಧಿಕಾರಿಗಳು:ಜಿಲ್ಲಾಮಟ್ಟದಲ್ಲಿ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ 47 ಪ್ರತ್ಯೇಕ             ಸಂರಕ್ಷಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರನ್ನು ದೌರ್ಜನ್ಯಕ್ಕೊಳಗಾದ ಮಹಿಳೆಯರನ್ನು ರಕ್ಷಿಸಲು ಸಂರಕ್ಷಣಾಧಿಕಾರಿಗಳೆಂದು ನೇಮಿಸಲಾಗಿದೆ.

ಕಾನೂನು:ರಾಜ್ಯದ ಎಲ್ಲಾ ತಾಲ್ಲೂಕುಗಳ ಶಿಶುಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಉಚಿತ ಕಾನೂನು ಸಲಹಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಆ ಕೇಂದ್ರಗಳಲ್ಲಿ ನುರಿತ ನ್ಯಾಯವಾದಿಗಳು ಪ್ರತಿ ಬುಧವಾರ ಮತ್ತು ಶನಿವಾರ ಉಚಿತ ಕಾನೂನು ಸಲಹೆ ನೀಡುತ್ತಿದ್ದಾರೆ. 

ಅಶ್ರಯ ವ್ಯವಸ್ಥೆ: ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ರಕ್ಷಣೆ, ಅಲ್ಪಾವಧಿ ಆಶ್ರಯ ಮತ್ತು ಸಲಹೆ ಹಾಗು ಮಾರ್ಗದರ್ಶನ ಒದಗಿಸಲು ರಾಜ್ಯದಲ್ಲಿ ಸ್ವಾಧಾರ ಕೇಂದ್ರಗಳು, ಅಲ್ಪಾವಧಿ ವಸತಿಗೃಹಗಳು, ಸಾಂತ್ವನ ಕೇಂದ್ರಗಳನ್ನು ರಕ್ಷಣಾ ಗೃಹಗಳೆಂದು ಅಧಿಸೂಚನೆ ಹೊರಡಿಸಲಾಗಿದ್ದು, ನೊಂದ ಮಹಿಳೆಯರು ಇಲ್ಲಿ ಸಮಾಲೋಚನೆ ಹಾಗು ರಕ್ಷಣೆ, ಅಲ್ಪಾವಧಿ ಆಶ್ರಯ ಪಡೆಯಬಹುದಾಗಿದೆ.

ಸೇವಾದಾತ ಸಂಸ್ಥೆಗಳು(ಸರ್ವೀಸ್ ಪ್ರೋವೈಡರ್): ಇದಲ್ಲದೆ 116 ಸ್ವಯಂಸೇವಾ ಸಂಸ್ಥೆಗಳನ್ನು ನೊಂದ ಮಹಿಳೆಯರಿಗೆ ಕಾನೂನು, ವೈದ್ಯಕೀಯ ಹಾಗೂ ಇತರೆ ನೆರವು ನೀಡಲು ಸೇವಾ ಸಂಸ್ಥೆಗಳು ಎಂದು ಅಧಿಸೂಚನೆ ಹೊರಡಿಸಲಾಗಿದೆ.

ಸಮನ್ವಯ ಸಮಿತಿ: ಕಾಯ್ದೆಯ ಸಮರ್ಪಕ ಅನುಷ್ಠಾನಕ್ಕಾಗಿ ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಮನ್ವಯ ಸಮಿತಿಗಳನ್ನು ರಚಿಸಲಾಗಿದೆ.

ವೈಧ್ಯಕಿಯ ವ್ಯವಸ್ಥೆ:ರಾಜ್ಯ ಎಲ್ಲಾ ಸರ್ಕಾರಿ ಅಸ್ಪತ್ರೆಗಳು ನೊಂದವರಿಗೆ ವೈದ್ಯಕೀಯ ನೆರವು ನೀಡುವಂತೆ ಸೊಚನೆ ನೀಡಿದೆ.

 

ಟ್ರಾನ್ಸಿಟ್ ಹಾಸ್ಟೆಲ್ ಯೋಜನೆ:ಉದ್ಯೋಗ, ಸಂದರ್ಶನ, ಪ್ರವೇಶ ಪರೀಕ್ಷೆ ಹಾಗೂ ಇನ್ನಿತರೆ ಕೋರ್ಸ್‌ ಗಳ ಪ್ರವೇಶ ಪರೀಕ್ಷೆಗಳಿಗೆ ಹಾಜರಾಗಲು ಬೆಂಗಳೂರಿಗೆ ಬರುವ ಮಹಿಳೆಯರಿಗೆ ಸುರಕ್ಷಿತ ಆಶ್ರಯ, ರಕ್ಷಣೆ ಹಾಗೂ ಇನ್ನಿತರ ಅಂಶಗಳನ್ನು ಪರಿಗಣಿಸಿ ರಾಜ್ಯಸರ್ಕಾರವು 11 ಟ್ರಾನ್ಸಿಟ್‌ ಹಾಸ್ಟೆಲ್‌ ಗಳನ್ನು ಪ್ರಾರಂಭಿಸಿದೆ,ಎಲ್ಲಾ ವರ್ಗದ ಮಹಿಳೆಯರಿಗೂ ವರಮಾನ ಮಿತಿಯಿಲ್ಲದೆ ಗರಿಷ್ಟ 3 ದಿನಗಳು ತಂಗಲು ಅವಕಾಶ,ಉಚಿತ ವಸತಿ,ಉಪಹಾರ, ಊಟ ಮತ್ತು ಸ್ನಾನಕ್ಕೆ ಬಿಸಿನೀರು, ಭದ್ರತಾ ಕಪಾಟು ಸೌಲಭ್ಯ., ಯಾವುದೇ ಶುಲ್ಕ ಭರಿಸುವಂತಿಲ್ಲ,ಈ ಯೋಜನೆಯು ಬೇರೆ ಜಿಲ್ಲೆಗಳಿಂದ ಒಂಟಿಯಾಗಿ ಬೆಂಗಳೂರಿಗೆ ಬರುವ ವಿದ್ಯಾರ್ಥಿನಿಯರು ಮತ್ತು ಮಹಿಳೆಯರಿಗೆ ಮಾತ್ರ.

 

ಮಹಿಳಾ ಉದ್ದೇಶಿತ ಆಯವ್ಯಯ:

 1. ಲಿಂಗಾಧಾರಿತ ದೃಷ್ಠಿಕೋನವು ಮಾನವ ಅಭಿವೃದ್ಧಿಯಲ್ಲಿ ಮಹಿಳೆಯರಿಗೆ ನೀಡಿರುವ ಪರಸ್ಪರ ಸ್ಥಾನಮಾನವನ್ನು ವಿವಿಧ ಅಭಿವೃದ್ಧಿ ಸೂಚ್ಯಾಂಕಗಳಾದ ಶಿಕ್ಷಣ, ಆರೋಗ್ಯ, ಆದಾಯ, ರಕ್ಷಣೆ, ಬದುಕುಳಿಯುವಿಕೆ, ಕೆಲಸದಲ್ಲಿ ಭಾಗವಹಿಸುವಿಕೆ, ನಿರ್ಣಯಗಳ ಕೈಗೊಳ್ಳುವಿಕೆ, ರಾಜಕೀಯದಲ್ಲಿ ಪಾಲ್ಗೊಳ್ಳುವಿಕೆ ಇತ್ಯಾದಿಗಳ ಮೌಲ್ಯಾಂಕನ ಮಾಡುವುದರ ಅವಶ್ಯಕತೆಗೆ ಒತ್ತು ನೀಡುವುದು. ಈ ಸೂಚ್ಯಾಂಕಗಳು ಪುರುಷರು ಮತ್ತು ಮಹಿಳೆಯರ ನಡುವಿನ ಸಾಧನೆಯ ಮಟ್ಟ ಹಾಗೂ ಅಂತರಗಳನ್ನು ಸೂಚಿಸುತ್ತದೆ. ಆದ್ಯತೆಯ ಕ್ಷೇತ್ರಗಳಲ್ಲಿ ನಿಯಮಗಳು, ಯೋಜನೆಗಳು ಮತ್ತು ಕಾರ್ಯಕ್ರಮಗಳ ಮುಖಾಂತರ ಅಂತರಗಳ ಸುಧಾರಣೆ ಹಾಗೂ ನಿವಾರಣೆ ಸರ್ಕಾರದ ಕಾಳಜಿಯಾಗಿರುತ್ತದೆ.
 2. ಮಹಿಳಾ ಉದ್ದೇಶಿತ ಆಯವ್ಯಯವನ್ನು ಮಹಿಳಾ ಉದ್ದೇಶಿತ ಯೋಜನೆಗಳಿಗೆ ಹಾಗೂ ಕಾರ್ಯಕ್ರಮಗಳಿಗೆ ಸಂಪನ್ಮೂಲಗಳನ್ನು ಒದಗಿಸುವುದರ ಮುಖಾಂತರ ಮಹಿಳೆಯರ ಅಭಿವೃದ್ಧಿ ಹಾಗೂ ಸಬಲೀಕರಣಕ್ಕೆ ನೇರವಾಗಿ ಉತ್ತೇಜನ ನೀಡುವ ಸಾಮಥ್ರ್ಯ ಹೊಂದಿದ ಒಂದು ಸಾಧನವೆಂದು ಗುರುತಿಸಲಾಗಿದೆ. ಈ ಆಯವ್ಯಯವು ವಿವಿಧ ಕ್ಷೇತ್ರಗಳಲ್ಲಿ ಸ್ಥಳೀಯ ಸರ್ಕಾರದ ನೀತಿಗಳು, ಯೋಜನೆಗಳು ಮತ್ತು ಆಯವ್ಯಯಗಳಲ್ಲಿರುವ ಲಿಂಗಾಧಾರಿತ ಅಂತರಗಳನ್ನು ನಿವಾರಿಸಲು ಬೇಕಾಗಿರುವ ಅವಶ್ಯಕ ಮಧ್ಯವರ್ತನೆಗಳನ್ನು ಗುರುತಿಸುವುದು ಹಾಗೂ ಪ್ರತಿಬಿಂಬಿಸುವುದಾಗಿರುತ್ತದೆ. ಲಿಂಗಾಧಾರಿತ ತಾರತಮ್ಯಗಳ ಪ್ರಭಾವವನ್ನು ಆದಾಯ ಉತ್ಪನ್ನ ನೀತಿಗಳು ಮತ್ತು ಸಂಪನ್ಮೂಲ ಹಂಚಿಕೆಯನ್ನು ವಿಶ್ಲೇಷಣೆ ಮಾಡುವ ಗುರಿಯನ್ನು ಸಹ ಇದು ಹೊಂದಿದೆ.
 3. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಮಹಿಳೆಯರ ತೊಂದರೆಗಳನ್ನು/ಕಾಳಜಿಗಳನ್ನು ಪರಿಹರಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಲಿಂಗಾಧಾರಿತ ಆಯವ್ಯಯವು ಆದ್ಯತೆಯನ್ನು ಗುರುತಿಸಲು ನೆರವಾಗುವ ಜೊತೆಗೆ ಸಾರ್ವಜನಿಕ ವೆಚ್ಚಗಳಲ್ಲಿ ಮಹಿಳೆಯರ ಬಗ್ಗೆ ಸರ್ಕಾರದ ಕಾಳಜಿಯನ್ನು ಬಿಂಬಿಸಲು ಶಕ್ತವಾಗುತ್ತದೆ.
 4. ಲಿಂಗತ್ವ ಸಮಾನತೆಯನ್ನು ಖಚಿತಪಡಿಸಲು ಮತ್ತು ಮಹಿಳೆಯರನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತರಲು ನಿಧಿಯನ್ನು ಅಂತರವಲಯ ಹಂಚಿಕೆ ಮಾಡುವ ಯೋಜನೆಯನ್ನು ಮೇಲ್ವಿಚಾರಣೆ ಮಾಡುವ ದೃಷ್ಠಿಯಿಂದ ನಿರ್ದೇಶನಾಲಯದಲ್ಲಿ ದಿನಾಂಕ:03-5-2003 ರಿಂದ ಕರ್ನಾಟಕ ಮಹಿಳಾ ಅಭಿವೃದ್ಧಿ ಯೋಜನಾ ಘಟಕವನ್ನು ಪ್ರಾರಂಭಿಸಲಾಗಿದೆ. ಸರ್ಕಾರದಲ್ಲಿ ವಿವಿಧ ಇಲಾಖೆಗಳ ಎಲ್ಲಾ ಫಲಾನುಭವಿ ಆಧಾರಿತ ಯೋಜನೆಗಳಿಗೆ ಒದಗಿಸುವ ಸಂಪನ್ಮೂಲಗಳಲ್ಲಿ 1/3 ಭಾಗವನ್ನು ಮಹಿಳೆಯರಿಗೆ ಮೀಸಲಿಡುವುದೇ ಈ ಯೋಜನೆಯ ಉದ್ದೇಶವಾಗಿದೆ.
 5. ರಾಜ್ಯದಲ್ಲಿ 2007-08 ನೇ ಸಾಲಿನಿಂದ ಮಹಿಳಾ ಉದ್ದೇಶಿತ ಆಯವ್ಯಯವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಆರ್ಥಿಕ ಇಲಾಖೆಯ ವಿತ್ತೀಯ ಕಾರ್ಯನೀತಿ ಸಂಸ್ಥೆಯು ಮಹಿಳಾ ಉದ್ದೇಶಿತ ಆಯವ್ಯಯ ಹಂಚಿಕೆ ಮಾಡಿ ಬಜೆಟ್‍ನಲ್ಲಿ ಮಂಡಿಸಲು ನೋಡಲ್ ಸಂಸ್ಥೆಯೆಂದು ಗುರುತಿಸಲಾಗಿದೆ. ಆರ್ಥಿಕ ಇಲಾಖೆಯ ಫಿಸ್ಕಲ್ ಪಾಲಿಸಿ ಸಂಸ್ಥೆ, ಬೆಂಗಳೂರು, ಆಡಳಿತ ತರಬೇತಿ ಸಂಸ್ಥೆ ಮತ್ತು ಎಸ್ ಐ ಆರ್ ಡಿ , ಮೈಸೂರು ಸಂಸ್ಥೆಯನ್ನು ತರಬೇತಿ ಸಂಸ್ಥೆ ಎಂದು ಸರ್ಕಾರದಿಂದ ಗುರುತಿಸಲ್ಪಟ್ಟಿರುತ್ತದೆ.
 6. ಅನುಷ್ಠಾನ ಮತ್ತು ಮೇಲ್ವಿಚಾರಣೆಸಂಬಂಧಪಟ್ಟ ಇಲಾಖೆಗಳು ಸರ್ಕಾರದ ಕಾರ್ಯಕ್ರಮ ಮತ್ತು ಯೋಜನೆಗಳನ್ನು ಅನುಷ್ಠಾನಗೊಳಿಸಲು ಯೋಜನೆಗಳ ಮಾಸಿಕ ಪ್ರಗತಿಯ ಉಸ್ತುವಾರಿಯನ್ನು ದಾಖಲೀಕರಣಕ್ಕಾಗಿ ಮಾಸಿಕ ಕಾರ್ಯಕ್ರಮ ಅನುಷ್ಠಾನ ವೇಳಾಪಟ್ಟಿಯ (MPIC) ನಮೂನೆಯನ್ನು ಬಳಸಿಕೊಳ್ಳಲಾಗುತ್ತಿದೆ.
 7. ಮಹಿಳಾ ಉದ್ದೇಶಿತ ಆಯವ್ಯಯವನ್ನು 29 ಬೇಡಿಕೆಗಳಡಿಯಲ್ಲಿ ಎರಡು ವರ್ಗಗಳಲ್ಲಿ ಪ್ರಚುರಪಡಿಸಲಾಗಿದೆ. ಶೇಕಡಾ 100 ರಷ್ಟು ಮಹಿಳೆಯರ ಸೌಕರ್ಯಕ್ಕಾಗೇ ಇರುವ “ಎ” ವರ್ಗದ ಯೋಜನೆಗಳು, ಶೇಕಡಾ 30 ರಿಂದ ಶೇಕಡಾ 99 ರವರೆಗಿನ ಅನುದಾನವನ್ನು ಮಹಿಳೆಯರಿಗಾಗಿಯೇ ಮೀಸಲಿಟ್ಟಿರುವ ಯೋಜನೆಗಳು.
 8. ಮಹಿಳೆಯರ ಒಟ್ಟಾರೆ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ಮೇಲೆ ಮಹಿಳಾ ಉದ್ದೇಶಿತ ಆಯವ್ಯಯದ ಪರಿಣಾಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಯೋಜನಾ ಇಲಾಖೆಗಳು ಜಂಟಿಯಾಗಿ ಮೇಲುಸ್ತುವಾರಿ ಮಾಡಬೇಕಾಗಿರುತ್ತದೆ.

 

ಕೇಂದ್ರ ಸರ್ಕಾರದ ಯೋಜನೆಗಳು:

   

 1. ಸ್ವಾಧಾರಗೃಹ  (ಸಂಕಷ್ಟಪರಿಸ್ಥಿತಿಯಲ್ಲಿರುವ ಮಹಿಳೆಯರಿಗಾಗಿ ಯೋಜನೆ):2016-17ನೇ ಸಾಲಿನಿಂದ ಕೇಂದ್ರ ಸರ್ಕಾರವು ಸ್ವಾಧಾರ ಮತ್ತು ಅಲ್ಪಾವಧಿ ವಸತಿಗೃಹ ವಿಲೀನಗೊಳಿಸಿ ಸ್ವಾಧಾರಗೃಹ ಯೋಜನೆ ಅನುಷ್ಠಾನಕ್ಕೆ ತಂದಿರುತ್ತಾ. ಕಷ್ಟಕರ ಪರಿಸ್ಥಿತಿಯಲ್ಲಿರುವ ಮಹಿಳೆಯರಿಗಾಗಿ ಆಶ್ರಯ, ಆಹಾರ, ಬಟ್ಟೆ, ತರಬೇತಿ ಹಾಗೂ ಶಿಕ್ಷಣ, ವಸತಿ, ವೃತ್ತಿತರಬೇತಿ, ಸಮಾಲೋಚನೆ, ವೈದ್ಯಕೀಯ ನೆರವು, ಕುಟುಂಬಕ್ಕೆ ಪುನರ್‍ಮಿಲನ ಮತ್ತು ಕಾನೂನಿನ ನೆರವನ್ನು ನೀಡುವುದರ ಮೂಲಕ ಆರ್ಥಿಕವಾಗಿ, ಸಾಮಾಜಿಕವಾಗಿ ಸಶಕ್ತರಾಗುವಂತೆ ಮಾಡುವುದು ಯೋಜನೆಯ ಉದ್ದೇಶ. ನೊಂದಣಿಯಾಗಿ ಮೂರು ವರ್ಷವಾಗಿರುವ ಆರ್ಥಿಕವಾಗಿ ಸದೃಢವಾದ ಎಲ್ಲಾ ಮೂಲಭೂತ ಅನುಕೂಲತೆಗಳನ್ನು ಹೊಂದಿದ, ಮಹಿಳಾ ಕಲ್ಯಾಣ ಕ್ಷೇತ್ರದಲ್ಲಿ ಅನುಭವವಿರುವ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕೇಂದ್ರಗಳಲ್ಲಿ, ಸಲಹಾ ಕೇಂದ್ರ, ತರಬೇತಿ ಕೇಂದ್ರ ಹಾಗೂ ವೈದ್ಯಕೀಯ ಕೇಂದ್ರಗಳನ್ನು ನಡೆಸಲು ಅವಕಾಶವಿದೆ,ರಾಜ್ಯದಲ್ಲಿ ಪ್ರಸ್ತುತ 52 ಸ್ವಾಧಾರಗೃಹ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.

 2. ಸಖಿ-ಒನ್ ಸ್ಟಾಪ್ ಸೆಂಟರ್­:ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ಸಮಗ್ರ ಸೌಲಭ್ಯ ಅಂದರೆ, ವೈದ್ಯಕೀಯ ಚಿಕಿತ್ಸೆ ಮತ್ತು ನೆರವು, ಪೊಲೀಸ್ ನೆರವು, ಕಾನೂನು ನೆರವು ಸಮಾಲೋಚನೆ ಹಾಗೂ ತಾತ್ಕಾಲಿಕ ಅಶ್ರಯ ವ್ಯವಸ್ಥೆಗಳನ್ನು ಒನ್ ಸ್ಟಾಪ್ ಸೆಂಟರ್‌ನಲ್ಲಿ ಒದಗಿಸಲಾಗುತ್ತಿದೆ. ರಾಜ್ಯದ ಎಲ್ಲಾ 30 ಜಿಲ್ಲೆಗಳ ಸರ್ಕಾರಿ ಜಿಲ್ಲಾ ಆಸ್ಪತ್ರೆಗಳಲ್ಲಿ ಒನ್ ಸ್ಟಾಪ್ ಸೆಂಟರ್ (ಸಖಿ)ಗಳು ಕಾರ್ಯನಿರ್ವಹಿಸುತ್ತಿವೆ,  ಒನ್ ಸ್ಟಾಪ್ ಸೆಂಟರ್‌ಗಳಿಗೆ ಶೇ.100ರಷ್ಟು ಅನುದಾನವನ್ನು ಕೇಂದ್ರ ಸರ್ಕಾರವೇ ಭರಿಸುತ್ತಿದ್ದು, ಜಿಲ್ಲಾಧಿಕಾರಿಗಳಿಗೆ ನೇರವಾಗಿ ಅನುದಾನ ಬಿಡುಗಡೆಯಾಗುತ್ತದೆ,ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಅನುದಾನದಲ್ಲಿ ಸ್ವಂತ ಕಟ್ಟಡ ನಿರ್ಮಿಸಿ ಅವಶ್ಯ ಸಿಬ್ಬಂದಿಗಳನ್ನು ಆಡಳಿತಾಧಿಕಾರಿ, ಸಮಾಲೋಚಕರು, ಕಾನೂನು ಸಲಹೆಗಾರರು, ಸಮಾಜಸೇವಾ ಕಾರ್ಯಕರ್ತರು ನೇಮಿಸಲಾಗಿದು, ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ, ಜಿಲ್ಲಾಧಿಕಾರಿಗಳ ಅದ್ಯಕ್ಷತೆಯ ಸಮಿತಿಯಲ್ಲಿ ಯೋಜನೆಯ ಅನುಷ್ಠಾನದ ಮೇಲ್ವಿಚಾರಣೆ ನಡೆಸಲಾಗುವುದು.

 

                              

 

 

 1. ಯೂನಿವರ್ಸಲೈಸೇಷನ್ ಆಫ್ ವಿಮೆನ್ ಹೆಲ್ಪ್ ಲೈನ್-181: 
  • ಮಹಿಳೆಯರಿಗೆ ಮಾಹಿತಿಯನ್ನು ನೀಡಲು ಹಾಗೂ ದೌರ್ಜನ್ಯ ಮತ್ತು ಸಂಕಷ್ಟದಲ್ಲಿರುವ ಮಹಿಳೆಯರಿಗೆ ತುರ್ತು ನೆರವನ್ನು ಒಂದೇ ಸೂರಿನಡಿ ಒದಗಿಸುವ ನಿಟ್ಟಿನಲ್ಲಿ ಯೂನಿವರ್ಸಲೈಸೇಷನ್ ಆಫ್ ವುಮೆನ್ ಹೆಲ್ಫ್‌ ಲೈನ್‌ - 181 ಎಂಬ ಉಚಿತ ದೂರವಾಣಿ ಸೇವೆಯನ್ನು ದಿನದ 24*7 ಗಂಟೆಗಳು ರಾಜ್ಯಾದ್ಯಂತ ಒದಗಿಸಲಾಗುತ್ತಿದೆ.
  • ತುರ್ತು ರಕ್ಷಣೆ ಸಂದರ್ಭದಲ್ಲಿ ಕರೆಗಳನ್ನು ಪೊಲೀಸರಿಗೆ ವರ್ಗಾಯಿಸಿ ಸೇವೆ ಒದಗಿಸಲಾಗುತ್ತಿದೆ.
  • ಕೌಟುಂಬಿಕ ದೌರ್ಜನ್ಯ ಪ್ರಕರಣಗಳ ಕರೆಗಳನ್ನು ತಾಲ್ಲೂಕು ಸಂರಕ್ಷಣಾಧಿಕಾರಿಗಳಿಗೆ ವರ್ಗಾಯಿಸಿ ಸೇವೆ ನೀಡಲಾಗುತ್ತಿದೆ
  • ಸಮಾಲೋಚನಾ ಕರೆಗಳನ್ನು ಸಖಿ ಕೇಂದ್ರಗಳಿಗೆ, ಸಾಂತ್ವನ ಕೇಂದ್ರಗಳಿಗೆ ವರ್ಗಾಯಿಸಿ ಸೇವೆ ಒದಗಿಸಲಾಗುತ್ತಿದೆ.
  • ತಾತ್ಕಾಲಿಕ ಆಶ್ರಯ ಬಯಸುವ ಕರೆಗಳನ್ನು ಸ್ವಾಧಾರ ಗೃಹಗಳಿಗೆ ವರ್ಗಾಯಿಸಿ ಸೇವೆ ಒದಗಿಸಲಾಗುತ್ತಿದೆ.
  • ಬಾಲ್ಯ ವಿವಾಹಕ್ಕೆ ಸಂಬಂಧಿಸಿದ ಕರೆಗಳನ್ನು ಬಾಲ್ಯ ವಿವಾಹ ನಿಷೇದಾಧಿಕಾರಿಗಳಿಗೆ ವರ್ಗಾಯಿಸಿ ಸೇವೆ ಒದಗಿಸಲಾಗುತ್ತಿದೆ.

                                                                                  

 

 

                                                      

 

 

 

            

ಇತ್ತೀಚಿನ ನವೀಕರಣ​ : 15-06-2023 01:30 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ನಿರ್ದೇಶನಾಲಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080